Hedding : Regarding organizing a painting competition as part of the International Day of Democracy...
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸುವ ಕುರಿತು...
ವಿಶ್ವ ಸಂಸ್ಥೆಯು ಅಂಗೀಕರಿಸಿದ ಪ್ರಜಾಪ್ರಭುತ್ವದ ವಿಶ್ವಘೋಷಣೆಯನ್ನು ಸ್ಮರಿಸುವ ದಿನವಾದ ಸೆಪ್ಟೆಂಬರ್ 15 ರಂದು ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಯನ್ನು ಸೆಪ್ಟೆಂಬರ್ 15, 2025ರಂದು ಆಯೋಜಿಸಲಾಗುತ್ತಿದ್ದು ಈ ವರ್ಷದ ವಿಷಯವು 'ನನ್ನ ಮತ ನನ್ನ ಹಕ್ಕು' ಆಗಿರುತ್ತದೆ.
ಈ ಆಚರಣೆಯ ಉದ್ದೇಶವು ಭಾರತದ ಸಂವಿಧಾನದಲ್ಲಿ ಅಳವಡಿಸಲಾದ ಪ್ರಜಾಪ್ರಭುತ್ವದ ಮೂಲಭೂತ ಮೌಲ್ಯಗಳು ಮತ್ತು ತತ್ವಗಳನ್ನು ಪುನರುಚ್ಛರಿಸಿ ಉತ್ತೇಜಿಸುವುದಾಗಿದೆ. ಆಡಳಿತ ಹಾಗೂ ಸಾರ್ವಜನಿಕ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಪ್ರಜಾಪ್ರಭುತ್ವದ ಆದರ್ಶಗಳನ್ನು ಕಾಪಾಡಿ, ಪೋಷಿಸಿ, ಬಲಪಡಿಸುವ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ಹೊಂದಿದ್ದೇವೆ ಎಂಬುದನ್ನು ನೆನಪಿಸಿಕೊಳ್ಳುವುದಾಗಿದೆ.
ಈ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ದಿನಾಂಕ 15.09.2025 ರಿಂದ ಚಿತ್ರಕಲಾ ಸ್ಪರ್ಧೆಯನ್ನು ಶಾಲಾ ಶಿಕ್ಷಣ ಇಲಾಖೆಯ ಶಾಲೆಗಳ ಆರರಿಂದ ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ಆಯೋಜಿಸಲು ಉದ್ದೇಶಿಸಲಾಗಿರುತ್ತದೆ. ಸದರಿ ಸ್ಪರ್ಧೆಯನ್ನು ಇಲಾಖೆಯ ಎಲ್ಲಾ ಹಂತದ ಅಧಿಕಾರಿಗಳು ಸಮುದಾಯದ ಸಹಕಾರದೊಂದಿಗೆ ಸ್ಥಳೀಯ ಹಬ್ಬದ ರೀತಿಯಲ್ಲಿ ಉತ್ತಮವಾಗಿ ಆಯೋಜಿಸಲು ಸೂಚಿಸಿದೆ.
ಈ ಕಾರ್ಯಕ್ರಮದ ಅಂಗವಾಗಿ ಶಾಲಾ ವಿದ್ಯಾರ್ಥಿಗಳ ಕಲಾತ್ಮಕ ಪ್ರತಿಭೆಯನ್ನು ಮತ್ತು ಸೃಜನಾತ್ಮಕ ಕೌಶಲ್ಯಗಳನ್ನು ಅಭಿವ್ಯಕ್ತಗೊಳಿಸಲು ಬ್ಲಾಕ್ ಮಟ್ಟದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯವರೊಡನೆ ಸಮನ್ವಯ ಸಾಧಿಸಿ ಸ್ಪರ್ಧೆಯನ್ನು ಆಯೋಜಿಸಿ, ತಾಲ್ಲೂಕುಗಳಿಂದ ಮೊದಲ ಮೂರು ಸ್ಥಾನಗಳನ್ನು ಪಡೆದ ವಿದ್ಯಾರ್ಥಿಗಳ ವಿವರವನ್ನು ಜಿಲ್ಲಾ ಉಪ ನಿರ್ದೇಶಕರಿಗೆ ನೀಡುವುದು.
ಜಿಲ್ಲಾ ಮಟ್ಟದಲ್ಲಿ ಉಪ ನಿರ್ದೇಶಕರು (ಆಡಳಿತ) ಮತ್ತು ಉಪನಿರ್ದೇಶಕರು (ಅಭಿವೃದ್ಧಿ) ರವರು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಡನೆ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯವರೊಡನೆ ಸಮನ್ವಯ ಸಾಧಿಸಿ ಬ್ಲಾಕ್ ಹಂತದ ವಿಜೇತ ವಿದ್ಯಾರ್ಥಿಗಳಿಗೆ ಸ್ಪರ್ಧೆಯನ್ನು ಆಯೋಜಿಸಿ, ಜಿಲ್ಲಾ ಹಂತದಲ್ಲಿ ಮೊದಲ ಮೂರು ಸ್ಥಾನಗಳನ್ನು ಪಡೆದ ವಿದ್ಯಾರ್ಥಿಗಳ ವಿವರವನ್ನು ನಿರ್ದೇಶಕರು (ಪ್ರಾಥಮಿಕ ಶಿಕ್ಷಣ), ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಕಛೇರಿಗೆ ನೀಡಲು ಕ್ರಮವಹಿಸುವಂತೆ ತಿಳಿಸಿದೆ.
ಜಿಲ್ಲಾ ಹಂತದಲ್ಲಿ ಮೊದಲ ಮೂರು ಸ್ಥಾನಗಳನ್ನು ಪಡೆದ ವಿದ್ಯಾರ್ಥಿಗಳ ವಿವರವನ್ನು ಆಧರಿಸಿ ರಾಜ್ಯ ಮಟ್ಟದಲ್ಲಿ ಮೊದಲ ಮೂರು ಸ್ಥಾನವನ್ನು ಪಡೆಯುವ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲು ಸಮಾಜ ಕಲ್ಯಾಣ ಇಲಾಖೆಗೆ ಕಳುಹಿಸಲು ಕ್ರಮವಹಿಸಲಾಗುವುದು.
ಪ್ರತಿ ಹಂತದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ದಿನಾಂಕ 14.11.2025 ರ ಮಕ್ಕಳ ದಿನಾಚರಣೆ ಕಾರ್ಯಕ್ರಮದಂದು ನಗದು ಬಹುಮಾನವನ್ನು ವಿತರಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಉಪ ನಿರ್ದೇಶಕರು (ಆಡಳಿತ) ಕ್ರಮವಹಿಸುವಂತೆ ತಿಳಿಸಿದೆ.
CLICK HERE TO DOWNLOAD THE PDF FILE 🗄️🗃️🗃️🗃️...
No comments:
Post a Comment